ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 9ನೇ ಚೀತಾ ಸಾವು
- DoubleClickMedia
- Aug 2, 2023
- 1 min read

ಭೋಪಾಲ್, ಆ 2: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬುಧವಾರ ಮತ್ತೊಂದು ಚೀತಾ ಸಾವನ್ನಪ್ಪಿದ್ದು, ಐದು ತಿಂಗಳಲ್ಲಿ ಚೀತಾಗಳ ಸಾವಿನ ಸಂಖ್ಯೆ ಒಂಭತ್ತಕ್ಕೆ ಏರಿದೆ.
ಈ ಕುರಿತಾಗಿ ಕುನೋ ರಾಷ್ಟ್ರೀಯ ಉದ್ಯಾನ ಪ್ರಾಧಿಕಾರ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಧಾತ್ರಿ ಹೆಸರಿನ ಹೆಣ್ಣು ಚೀತಾ ಸಾವನ್ನಪ್ಪಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ಈ ಹೆಣ್ಣು ಚೀತಾದ ಸಾವಿಗೆ ಈವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚೀತಾ ಮೃತ ದೇಹದ ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ಬಳಿಕಷ್ಟೇ ಚೀತಾ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
2022ರ ಸೆಪ್ಟೆಂಬರ್‌ನಲ್ಲಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಿಂದ ಒಟ್ಟು 20 ವಯಸ್ಕ ಚೀತಾಗಳನ್ನು ತರಲಾಗಿತ್ತು. ಭಾರತಕ್ಕೆ ಬಂದ ಬಳಿಕ ಚೀತಾಗಳು ನಾಲ್ಕು ಮರಿಗಳನ್ನು ಹಾಕಿವೆ. ಈ ಪೈಕಿ 6 ವಯಸ್ಕ ಚೀತಾಗಳು ಈವರೆಗೆ ಸಾವನ್ನಪ್ಪಿದ್ದು, 3 ಚೀತಾ ನವಜಾತ ಮರಿಗಳೂ ಸಾವನ್ನಪ್ಪಿವೆ.
ಕಳೆದ ಜುಲೈ ತಿಂಗಳಲ್ಲಿ ಕೇವಲ 3 ದಿನಗಳ ಅಂತರದಲ್ಲಿ 2 ವಯಸ್ಕ ಗಂಡು ಚೀತಾಗಳು ಸಾವನ್ನಪ್ಪಿದ್ದವು. ತೇಜಸ್ ಹೆಸರಿನ ಚೀತಾ ಜುಲೈ 11 ರಂದು ಸಾವನ್ನಪ್ಪಿದ್ದರೆ, ಸೂರಜ್ ಹೆಸರಿನ ಚೀತಾ ಜುಲೈ 14 ರಂದು ಸಾವನ್ನಪ್ಪಿತ್ತು. ಗಂಡು ಚೀತಾ ತೇಜಸ್ ಸಾವಿಗೆ ಗಾಯ ಹಾಗೂ ಮಾನಸಿಕ ಆಘಾತ ಕಾರಣವಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಲ್ಲಿ ವಿವರಿಸಲಾಗಿತ್ತು. ಹೆಣ್ಣು ಚೀತಾ ಜೊತೆ ಸಂಘರ್ಷ ನಡೆಸಿದ್ದ ಗಂಡು ಚೀತಾ ತೇಜಸ್ ಗಂಭೀರವಾಗಿ ಗಾಯಗೊಂಡಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಸಾವನ್ನಪ್ಪಿತ್ತು.
Comments