ಚಿರತೆ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಹಸು
- DoubleClickMedia
- Jun 9, 2023
- 1 min read

ದಾವಣಗೆರೆ ಜೂ 9: ಹಸು ತನ್ನ ಮಾಲೀಕನನ್ನು ಚಿರತೆ ದಾಳಿಯಿಂದ ಕಾಪಾಡಿ ಜೀವ ಉಳಿಸಿದ ಅಪರೂಪದ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಹತ್ತಿರ ಕೊಡಕಿನಕೆರೆ ಗ್ರಾಮದಲ್ಲಿ ನಡೆದಿದೆ.
ರೈತ ಕರಿಹಾಲಪ್ಪ ಎಂಬ ರೈತ ಹಸು ಮೇಯಿಸಲು ಹೋದಾಗ ಘಟನೆ ನಡೆದಿದೆ. ಎಂದಿನಂತೆ ಕರಿಹಾಲಪ್ಪ ಅವರ ತೋಟದಲ್ಲಿ ಹಸು ಮೇಯಲು ಬಿಟ್ಟು, ತೋಟದ ಕೆಲಸದಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿ ಕುಳಿತಿದ್ದ ಚಿರತೆಯೊಂದು ಕರಿಹಾಲಪ್ಪ ಮೇಲೆ ದಾಳಿ ಮಾಡಿದೆ.
ಈ ಸಂದರ್ಭದಲ್ಲಿ ಹಸು ಚಿರತೆಗೆ ತನ್ನ ಕೊಂಬಿನಿಂದ ತಿವಿದಿದೆ. ಆಗ ದೊಣ್ಣೆಹಿಡಿದು ಕರಿಹಾಲಪ್ಪ ಕೂಗಿದ್ದಾರೆ. ನಂತರ ಚಿರತೆ ಕಾಡಿನತ್ತ ಓಡಿ ಹೋಗಿದೆ. ಚಿರತೆ ದಾಳಿಯಿಂದ ತನ್ನ ಮಾಲೀಕನ ಪ್ರಾಣ ರಕ್ಷಣೆಗೆ ಮುಂದಾದ ಹಸು ಗೌರಿ ಸುತ್ತ ಮುತ್ತಲಿನ ಗ್ರಾಮಗಳು, ಉಬ್ರಾಣಿ ಹೋಬಳಿಯಲ್ಲಿ ಮನೆ ಮಾತಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಆರ್‌ಎಫ್‌ಒ ಸತೀಶ್ ತನ್ನ ಸಿಬ್ಬಂದಿಯೊಂದಿಗೆ ಚಿರತೆ ದಾಳಿ ಪ್ರದೇಶಕ್ಕೆ ತೆರಳಿ ಪರಿಶೀಲಿಸಿ ಅರಣ್ಯ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಚಿರತೆ ಸೆರೆಗೆ ಬೋನು ಇಡಲಾಗಿದೆ.
Comments