ಮಣಿಪುರ ಹಿಂಸಾಚಾರ: ಜೀವಭಯದಿಂದ ಮಿಝೋರಾಂ ತೊರೆಯುತ್ತಿರುವ ಮೈತೇಯಿಗಳು
- DoubleClickMedia
- Jul 23, 2023
- 2 min read

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಪರಿಣಾಮವಾಗಿ ನೆರೆ ರಾಜ್ಯ ಮಿಝೋರಾಂನಲ್ಲಿ ವಾಸಿಸುತ್ತಿರುವ ಮೈತೇಯಿಗಳು ರಾಜ್ಯ ಬಿಟ್ಟು ಪಲಾಯನ ಮಾಡುತ್ತಿದ್ದಾರೆ. ಆದರೆ ಮಣಿಪುರದಲ್ಲಿ ಅಶಾಂತಿಯ ನಡುವೆಯೂ ಮಿಜೋರಾಂ ರಾಜ್ಯದೊಳಗಿನ ಮೈತೇಯಿಗಳು ಭಯಪಡಬೇಕಾಗಿಲ್ಲ ಎಂದು ಮಿಜೋರಾಂ ಸರ್ಕಾರವು ಮೈತೇಯಿ ಸಮುದಾಯಕ್ಕೆ ಭರವಸೆ ನೀಡಿದೆ.
ಮಿಜೋರಾಂನ ಮಿಜೋಸ್ ಮಣಿಪುರದ ಕುಕಿ-ಜೋಮಿಗಳೊಂದಿಗೆ ಆಳವಾದ ಜನಾಂಗೀಯ ಬಾಂಧವ್ಯವನ್ನು ಹೊಂದಿದ್ದಾರೆ. ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಪಲಾಯನ ಮಾಡಿದ 12,000 ಕ್ಕೂ ಹೆಚ್ಚು ಕುಕಿ-ಜೋಮಿ ಜನರಿಗೆ ಮಿಝೋರಾಂ ಆಶ್ರಯ ನೀಡಿದೆ.
ಸಾಮೂಹಿಕ ಪಲಾಯನಕ್ಕೆ ಕಾರಣ:
ಮಾಜಿ ಉಗ್ರಗಾಮಿಗಳ ಸಂಘಟನೆಯಾದ ಪೀಸ್ ಅಕಾರ್ಡ್ MNF ರಿಟರ್ನಿಸ್
ಅಸೋಸಿಯೇಷನ್ (PAMRA), ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಮಿಜೋರಾಂನಲ್ಲಿರುವಾಗ ಎಚ್ಚರಿಕೆ ವಹಿಸುವಂತೆ ಮಣಿಪುರದ ಮೈತೇಯಿಗಳಿಗೆ ಸಲಹೆ ನೀಡಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು. ಮಣಿಪುರದಲ್ಲಿ ಇತ್ತೀಚೆಗೆ ಕುಕಿ ಸಮುದಾಯದ ವಿರುದ್ದ ನಡೆದ ಹಿಂಸಾತ್ಮಕ ಘಟನೆಗಳಿಂದಾಗಿ ಮಿಝೋರಾಂನಲ್ಲಿ ಮೈತೇಯಿಗಳ ವಿರುದ್ದ ಜನಾಭಿಪ್ರಾಯವಿದ್ದು ಮಣಿಪುರದ ಮೈತೈಗಳು ಮಿಜೋರಾಂನಲ್ಲಿ ವಾಸಿಸುವುದು ಇನ್ನು ಮುಂದೆ ಸುರಕ್ಷಿತವಲ್ಲ ಎಂದು ಅದು ಕರೆ ನೀಡಿತ್ತು. ಈ ಎಚ್ಚರಿಕೆಯಿಂದಾಗಿ ಮೈತೇಯಿಗಳು ಮಿಝೋರಾಂ ತೊರೆಯುತ್ತಿದ್ದಾರೆ. ಈಗಾಗಲೇ ಕನಿಷ್ಠ 69 ಮೈತೇಯಿಗಳು ಐಜ್ವಾಲ್‌ನ ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ಇಂಫಾಲ್‌ಗೆ ಪ್ರಯಾಣಿಸಿದ್ದಾರೆ.
ಈ ನಡುವೆ ಮಿಜೋ ಸ್ಟೂಡೆಂಟ್ಸ್ ಯೂನಿಯನ್, ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿರುವ ಮೈತೇಯಿ ಸಮುದಾಯದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಇನ್ನಷ್ಟು ಭೀತಿಯ ವಾತಾವರಣವನ್ನು ಸೃಷ್ಟಿಸಿತ್ತು.
ಮಿಝೋರಾಂನಲ್ಲಿ ಗಣನೀಯ ಸಂಖ್ಯೆಯ ಮೈತೇಯಿಗಳು ವಾಸಿಸುತ್ತಿದ್ದು, ಅದರಲ್ಲಿ ಹೆಚ್ಚಿನವರು ಮಣಿಪುರ ಮೂಲದವರಾಗಿದ್ದು, ಇನ್ನು ಕೆಲವರು ದಕ್ಷಿಣ ಅಸ್ಸಾಂನಿಂದ ಬಂದು ನೆಲೆಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಮಿಜೋರಾಂನಾದ್ಯಂತ ಸುಮಾರು 1,500 ಮೈತೇಯಿ ಕುಟುಂಬಗಳು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿವಿಧ ಸಾರಿಗೆ ವಿಧಾನಗಳ ಮೂಲಕ ಮೈತೇಯಿಗಳು ರಾಜಧಾನಿ ಐಜ್ವಾಲ್ ಅನ್ನು ತೊರೆದ ಬಗ್ಗೆ ವರದಿಯಾಗಿದೆ.
ಇತ್ತೀಚಿಗೆ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾದ ವೀಡಿಯೋ ವೈರಲ್ ಆಗಿದ್ದು, ಈ ಘಟನೆಯು ಮಿಝೋರಾಂನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ತೊರೆಯದಂತೆ ಕರೆ:
ಮಿಝೋರಾಂನ ಪ್ರಭಾವಿ ಸಂಘಟನೆ, ಸೆಂಟ್ರಲ್ ಯಂಗ್ ಮಿಜೋ ಅಸೋಸಿಯೇಷನ್ (CYMA) ಮೈತೇಯಿಗಳು ಮಿಝೋರಾಂನಲ್ಲಿ ಸುರಕ್ಷಿತವಾಗಿ ಇರಬಹುದು ಎಂದು ಕರೆ ನೀಡಿದೆ. ಮಿಜೋ ಸ್ಟೂಡೆಂಟ್ಸ್ ಯೂನಿಯನ್ (MZU) ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿದ ನಂತರ ಮಿಜೋರಾಂನಲ್ಲಿ ಈ ಮೊದಲು ಉದ್ದೇಶಿಸಿದ್ದ ಮೈತೇಯಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ನಿಲ್ಲಿಸಲು ನಿರ್ಧರಿಸಿದೆ.
ಮೋದಿಯನ್ನು ಪ್ರಶ್ನಿಸಿದ ಇರೋಮ್ ಶರ್ಮಿಳಾ:
ಮಣಿಪುರದಲ್ಲಿ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ವೈರಲ್ ವೀಡಿಯೊವನ್ನು ವೀಕ್ಷಿಸಿದ ನಂತರ ತೀವ್ರ ದುಃಖ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದರು ಮತ್ತು ಮಣಿಪುರದ ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಟೀಕಿಸಿದರು.
ಮೈತೇಯಿಗಳ ಸುರಕ್ಷಿತ ಸ್ಥಳಾಂತರಕ್ಕಾಗಿ ವಿಶೇಷ ವಿಮಾನ:
ಪರಿಸ್ಥಿತಿ ಹದಗೆಟ್ಟರೆ ಮೈತೇಯಿಗಳನ್ನು ಚಾರ್ಟರ್ಡ್ ಫ್ಲೈಟ್ ಮೂಲಕ ರಾಜ್ಯದಿಂದ ಸ್ಥಳಾಂತರಿಸಲು ಮಣಿಪುರ ಸರ್ಕಾರ ಚಿಂತನೆ ನಡೆಸಿದೆ. ಆದಾಗ್ಯೂ, ಇದುವರೆಗೆ ಮೈತೇಯಿ ಸಮುದಾಯದ ಮೇಲೆ ಯಾವುದೇ ದಾಳಿ ನಡೆದ ಬಗ್ಗೆ ವರದಿಯಾಗಿಲ್ಲ.
Comentarios