top of page
  • Writer's pictureDoubleClickMedia

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ನಾಪತ್ತೆ, ಉಗ್ರರಿಂದ ಅಪಹರಣ ಶಂಕೆ


Soldier Missing

ಶ್ರೀನಗರ, ಜು 30: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಸೇನಾಪಡೆಯ ಯೋಧರೊಬ್ಬರು ನಾಪತ್ತೆಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫ್ರೆಂಟ್ರಿ ರೆಜಿಮೆಂಟ್‌ನ ರೈಫಲ್ ಮನ್ ಜಾವೇದ್ ಅಹ್ಮದ್ ನಾಪತ್ತೆಯಾಗಿರುವ ಯೋಧ. ಕೆಲವು ದಿನಗಳ ಹಿಂದಷ್ಟೇ ಈ ಯೋಧ ರಜೆ ಪಡೆದು ಮನೆಗೆ ಬಂದಿದ್ದರು.



ಶನಿವಾರ ಸಂಜೆ 6.30ರ ಸುಮಾರಿಗೆ ಅವರು ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಹೊರಟಿದ್ದರು. ಅವರು ಆಲ್ಟೋ ಕಾರನ್ನು ಓಡಿಸುತ್ತಿದ್ದರು, ರಾತ್ರಿ 9 ಗಂಟೆಯಾದರೂ ವಾಪಸ್‌ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿದ್ದಾರೆ. ಮಾರುಕಟ್ಟೆಯ ಬಳಿ ಕಾರು ಪತ್ತೆಯಾಗಿದ್ದು, ವರದಿಗಳ ಪ್ರಕಾರ ಅದರಲ್ಲಿ ರಕ್ತದ ಕಲೆಗಳಿವೆ.


ಈ ಪ್ರಕರಣದ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಈಗಾಗಲೇ ಕೆಲವು ಶಂಕಿತರನ್ನೂ ವಶಕ್ಕೆ ಪಡೆಯಲಾಗಿದೆ. 25 ವರ್ಷ ವಯಸ್ಸಿನ ಈ ಯೋಧರ ಪತ್ತೆಗೆ ಭದ್ರತಾ ಪಡೆಗಳೂ ಕೂಡಾ ಹುಡುಕಾಟ ಆರಂಭಿಸಿವೆ.



ಇನ್ನು ಸೈನಿಕ ಜಾವೇದ್‌ ಅಹ್ಮದ್‌ನ ಕುಟುಂಬಸ್ಥರು ಇದೊಂದು ಅಪಹರಣ ಪ್ರಕರಣ ಇರಬಹುದು ಎಂದು ಶಂಕಿಸಿದ್ದಾರೆ. ಭಯೋತ್ಪಾದಕರೇ ತಮ್ಮ ಮಗನನ್ನು ಅಪಹರಣ ಮಾಡಿರಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಜಾವೇದ್ ಕುಟುಂಬಸ್ಥರು, ತಮ್ಮ ಮಗನನ್ನು ಬಿಡುಗಡೆ ಮಾಡುವಂತೆ ಉಗ್ರರಿಗೆ ಮನವಿ ಸಲ್ಲಿಸಿದ್ದಾರೆ.


“ದಯವಿಟ್ಟು ನಮ್ಮನ್ನು ಕ್ಷಮಿಸಿ, ನನ್ನ ಮಗನನ್ನು ಬಿಡುಗಡೆ ಮಾಡಿ, ನನ್ನ ಮಗ ಜಾವೇದ್‌ನನ್ನು ಬಿಡುಗಡೆ ಮಾಡಿ, ನಾನು ಅವರನ್ನು ಸೈನ್ಯದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ, ಆದರೆ ದಯವಿಟ್ಟು ಅವನನ್ನು ಬಿಡುಗಡೆ ಮಾಡಿ ಎಂದು ಯೋಧನ ತಾಯಿ ಬೇಡಿಕೊಂಡಿದ್ದಾರೆ. ಈ ಹಿಂದೆಯೂ ಈ ಪ್ರದೇಶದಲ್ಲಿ ರಜೆಯ ಮೇಲೆ ಮನೆಯಲ್ಲಿದ್ದ ಹಲವಾರು ಸೈನಿಕರನ್ನು ಉಗ್ರರು ಅಪಹರಿಸಿ ಹತ್ಯೆಗೈದಿದ್ದರು.



Comments


bottom of page