top of page

ತನ್ನ ವಿದೇಶಾಂಗ ಸಚಿವ ಕಣ್ಮರೆಯಾದ ಬೆನ್ನಲ್ಲೇ ನೂತನ ಸಚಿವರನ್ನು ಘೋಷಿಸಿದ ಚೀನಾ ಸರ್ಕಾರ

  • Writer: DoubleClickMedia
    DoubleClickMedia
  • Jul 25, 2023
  • 1 min read

chinese man standing in front of chinese flag


ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದ್ದು ಮಾಜಿ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಚೀನಾದ ಉನ್ನತ ಶಾಸಕಾಂಗ ಸಂಸ್ಥೆಯಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿಎಸ್‌ಸಿ) ಸ್ಥಾಯಿ ಸಮಿತಿಯ ಪ್ರಕಟಣೆ ತಿಳಿಸಿದೆ. ಕೇವಲ ಒಂದೇ ದಿನದ ಸೂಚನೆಯೊಂದಿಗೆ ನಡೆದ ವಿಶೇಷ ಸಭೆಯ ಈ ನಿರ್ಣಯವು ಕ್ವಿನ್ ಅವರ ಒಂದು ತಿಂಗಳ ನಿಗೂಢ ಅನುಪಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಪ್ತ ಎಂದು ಪರಿಗಣಿಸಲ್ಪಟ್ಟಿದ್ದ ಕ್ವಿನ್, ಜೂನ್ 25 ರಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಅವರನ್ನು ಬೀಜಿಂಗ್‌ನಲ್ಲಿ ಭೇಟಿಯಾದಾಗ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಚೀನಾದ ಅಧಿಕಾರಿಗಳು ಆರಂಭದಲ್ಲಿ ಅವರ ಗೈರುಹಾಜರಿಗಾಗಿ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿದ್ದು, ಆದರೆ ನಂತರ ಯಾವುದೇ ಹೇಳಿಕೆಗಳು ಅಥವಾ ವಿವರಣೆಗಳನ್ನು ವಿದೇಶಾಂಗ ಸಚಿವಾಲಯವು ಒದಗಿಸಿಲ್ಲ.

ಕ್ವಿನ್ ಅವರನ್ನು ವಜಾಗೊಳಿಸಿರುವುದಕ್ಕೆ ಕಾರಣಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ, ಇದು ವ್ಯಾಪಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಕಿರಿಯ ವಯಸ್ಸಿನ ವಿದೇಶಾಂಗ ಮಂತ್ರಿಯಾಗಿದ್ದರೂ ಚೀನೀ ಕಮ್ಯುನಿಸ್ಟ್ ಪಕ್ಷದಲ್ಲಿ ಅವರ ಬೆಳವಣಿಗೆ ಮತ್ತು ಅವರ ರಾಜತಾಂತ್ರಿಕ ಕೌಶಲಗಳು ವಿಶ್ವದ ಗಮನವನ್ನು ಸೆಳೆದಿದ್ದವು.


ಕ್ವಿನ್ ಕಣ್ಮರೆಯ ಹಿಂದೆ ಚೀನೀ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯದ ಜೊತೆಗೆ ಟಿವಿ ನಿರೂಪಕಿಯೊಂದಿಗಿನ ಸಂಬಂಧವೂ ಕಾರಣ ಎನ್ನಲಾಗಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಮತ್ತಷ್ಟು ಮುಜುಗರವಾಗುವುದನ್ನು ತಡೆಯಲು ತಾತ್ಕಾಲಿಕ ವ್ಯವಸ್ಥೆಯಾಗಿ ವಾಂಗ್ ಯಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಿರುವುದಾಗಿ ಹೇಳಲಾಗುತ್ತಿದೆ.



Comments


bottom of page