ಹರ್ಯಾಣದಲ್ಲಿ ಕೋಮು ಗಲಭೆ : 4 ಮಂದಿ ಸಾವು, ಇಂಟರ್ನೆಟ್ ಸ್ಥಗಿತ
- DoubleClickMedia
- Aug 1, 2023
- 1 min read

ಗುರುಗ್ರಾಮ, ಆ,1: ಹರ್ಯಾಣದ ಗುರುಗ್ರಾಮ ಸಮೀಪದ ನುಹ್‌ನಲ್ಲಿ ಧಾರ್ಮಿಕ ಮೆರವಣಿಗೆಯೊಂದರ ವೇಳೆ ಎರಡು ಗುಂಪುಗಳ ನಡುವೆ ಸೋಮವಾರ ಸಂಭವಿಸಿದ ಕೋಮು ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇನ್ನೂ ಕನಿಷ್ಠ 45 ಮಂದಿ ಗಾಯಗೊಂಡಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಗುರುಗ್ರಾಮ-ಆಳ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಗುಂಪೊಂದು ತಡೆದಿತ್ತು.
ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ ಸರ್ಕಾರಿ ಮತ್ತು ಖಾಸಗಿ ವಾಹನಗಳ ಮೇಲೆ ಗುಂಪು ದಾಳಿ ನಡೆಸಲಾಯಿತು. ಸಂಜೆಯ ಹೊತ್ತಿಗೆ, ಹಿಂಸಾಚಾರವು ಗುರುಗ್ರಾಮ-ಸೋಹ್ನಾ ಹೆದ್ದಾರಿಗೆ ಹರಡಿತು, ಅಲ್ಲಿ ಹಲವಾರು ಕಾರುಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಮೆರವಣಿಗೆಯಲ್ಲಿ ಭಾಗವಹಿಸಲು ಸುಮಾರು 2,500 ಜನರು ನುಹ್‌ಗೆ ಆಗಮಿಸಿದ್ದರು. ಹೊರಗೆ ಹಿಂಸಾಚಾರ ಅಪಾಯಕಾರಿ ಹಂತಕ್ಕೆ ತಲುಪಿದ್ದರಿಂದ ಅವರೆಲ್ಲರೂ ದೇವಸ್ಥಾನವೊಂದರ ಒಳಗೆ ಸಿಲುಕಿದ್ದರು. ಸಂಜೆ ವೇಳೆಗೆ ಅವರನ್ನು ಪೊಲೀಸರು ರಕ್ಷಿಸಿದರು.
ಪಲ್ವಾಲ್ ಮತ್ತು ಗುರುಗ್ರಾಮಗಳಲ್ಲಿ ಕೂಡ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಹಿಂಸಾತ್ಮಕ ಸಂಘರ್ಷಗಳ ಬಳಿಕ ನುಹ್, ಗುರುಗ್ರಾಮ, ಪಲ್ವಾಲ್ ಮತ್ತು ಫರಿದಾಬಾದ್‌ಗಳಲ್ಲಿ ಸೆಕ್ಷನ್ 144 ಹೇರಲಾಗಿದೆ. ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಪೀಕರ್ ಮೂಲಕ ಜನರು ತಮ್ಮ ಮನೆಗಳಲ್ಲಿ ಇರುವಂತೆ ನಿರಂತರವಾಗಿ ಸೂಚನೆ ನೀಡಲಾಗುತ್ತಿದೆ.
ಕೋಮು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 20 ಪ್ರಕರಣಗಳನ್ನು ದಾಖಲಿಸಿದ್ದು, ಅನೇಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ತಪ್ಪಿತಸ್ಥರನ್ನು ಗುರುತಿಸಲು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಕೋಮು ಉದ್ವಿಗ್ನತೆ ಮತ್ತಷ್ಟು ಹರಡುವುದನ್ನು ತಡೆಯಲು ಮತ್ತು ಸುಳ್ಳು ಸುದ್ದಿ ಹಾಗೂ ವದಂತಿಗಳಿಗೆ ಕಡಿವಾಣ ಹಾಕಲು ನುಹ್‌ನಲ್ಲಿ ಬುಧವಾರದವರೆಗೂ ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಲಾಗಿದೆ. ಗುರುಗ್ರಾಮ ಮತ್ತು ಫರೀದಾಬಾದ್ ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
Comments