ಮಂಗಳೂರು, ಮೇ 30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರನ್ನು ಕೆಲಸಕ್ಕೆ ಮರುನೇಮಕಾತಿಗೊಳಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಹತ್ಯೆಗೀಡಾಗಿದ್ದ ಮುಸ್ಲಿಂ ಯುವಕರ ಮೂವರು ಕುಟುಂಬಸ್ಥರು ತಮಗೂ ಸೂಕ್ತ ಪರಿಹಾರ ಮತ್ತು ಉದ್ಯೋಗ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೋಮು ವೈಷಮ್ಯದಿಂದಾಗಿ ಮುಸ್ಲಿಂ ಯುವಕರ ಹತ್ಯೆಯಾಗಿದ್ದರೂ ಹಿಂದಿನ ಬಿಜೆಪಿ ಸರಕಾರ ಸೂಕ್ತ ಪರಿಹಾರ ನೀಡದೆ ತಾರತಮ್ಯ ಎಸಗಿದೆ ಎಂದು ಯುವಕರ ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರ್ಕಾರ ಉದ್ಯೋಗಾವಕಾಶ ಕಲ್ಪಿಸಿದಂತೆ ತಮ್ಮ ಕುಟುಂಬದ ಸದಸ್ಯರಿಗೂ ಸರ್ಕಾರ ಸಮಾನವಾಗಿ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮಸೂದ್ ಬೆಳ್ಳಾರೆಯಲ್ಲಿ, ಮೊಹಮ್ಮದ್ ಫಾಜಿಲ್ ಸುರತ್ಕಲ್ ನ ಮಂಗಳಪೇಟೆಯಲ್ಲಿ ಮತ್ತು ಅಬ್ದುಲ್ ಜಲೀಲ್ ಕಾಟಿಪಳ್ಳದಲ್ಲಿ ಕೊಲೆಯಾಗಿದ್ದರು. ಪ್ರವೀಣ್ ನೆಟ್ಟಾರು ಹತ್ಯೆಯ ಒಂದು ವಾರದ ಮೊದಲು ಕಳೆಂಜದಲ್ಲಿ ಮಸೂದ್ ಮೇಲೆ ಹಲ್ಲೆ ನಡೆಸಲಾಗಿತ್ತು. ಜುಲೈ 21 ರಂದು ಅವರು ಗಾಯಗೊಂಡಿದ್ದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 28 ರಂದು ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅದೇ ದಿನ ಸುರತ್ಕಲ್‌ನಲ್ಲಿ ಮೊಹಮ್ಮದ್ ಫಾಜಿಲ್ ಮೇಲೆ ಹಲ್ಲೆ ನಡೆಸಲಾಯಿತು. 2022 ರ ಡಿಸೆಂಬರ್ 24 ರಂದು ಸುರತ್ಕಲ್‌ನ ಕೃಷ್ಣಾಪುರ, ಕಾಟಿಪಳ್ಳದಲ್ಲಿ ಅಬ್ದುಲ್ ಜಲೀಲ್ ಅವರನ್ನು ಹತ್ಯೆ ಮಾಡಲಾಗಿತ್ತು. ಕನ್ನಡ ದಿನಪತ್ರಿಕೆಯೊಂದರ ಜೊತೆ ಮಾತನಾಡಿದ ಫಾಜಿಲ್ ತಾಯಿ ಸಾರಮ್ಮ, "ಬೆಳೆದ ಮಗನನ್ನು ಕಳೆದುಕೊಂಡು ನನ್ನಂತೆ ಯಾವ ತಾಯಿಯೂ ನರಳಬಾರದು, ಹಿಂದಿನ ಸರ್ಕಾರದ ರಾಜಕೀಯ ಪ್ರತಿನಿಧಿಗಳು ನಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ, ನಮಗೆ ಪರಿಹಾರ ನೀಡಿಲ್ಲ, ಪ್ರವೀಣ್ ನೆಟ್ಟಾರು ಹೆಂಡತಿಗೆ ಕೆಲಸ ಕೊಡಿಸಲಾಯಿತು, ನಮ್ಮ ಕುಟುಂಬ ಕಷ್ಟದಲ್ಲಿದ್ದರೂ ನಮ್ಮನ್ನು ನಿರ್ಲಕ್ಷಿಸಲಾಗಿದೆ. ಈಗಿನ ಸರಕಾರ ನಮಗೆ ನ್ಯಾಯ ಒದಗಿಸಬೇಕು. ನಮ್ಮ ಕುಟುಂಬದ ಯಾರಿಗಾದರೂ ಸರಕಾರಿ ಉದ್ಯೋಗದ ಜೊತೆಗೆ ನಮ್ಮ ಕುಟುಂಬಕ್ಕೂ ಪರಿಹಾರ ನೀಡಬೇಕು" ಎಂದು ಅವರು ಹೇಳಿದರು.
ಪ್ರವೀಣ್ ನೆಟ್ಟಾರು ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಫಾಜಿಲ್ ಹತ್ಯೆ ಮಾಡಲಾಗಿದ್ದು, ನನ್ನ ಮಗನ ಸಾವಿಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇನೆ ಎಂದು ಫಾಜಿಲ್ ತಂದೆ ಉಮರ್ ಫಾರೂಕ್ ಹೇಳಿದ್ದಾರೆ. "ನಾನು ಲಾರಿ ಚಾಲಕ, ತುಂಬಾ ಕಷ್ಟಪಟ್ಟು ದುಡಿದು ನನ್ನ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದೇನೆ. ಫಾಜಿಲ್ ಕೊಲೆಯಾದ ಮರುದಿನ ನನ್ನ ಇನ್ನೊಬ್ಬ ಮಗ ವಿದೇಶಕ್ಕೆ ಹೋಗಬೇಕಾಯಿತು. ಆದರೆ ಆತ ಇಲ್ಲೇ ಉಳಿಯುವಂತಾಯಿತು. ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಪರಿಹಾರ ಮತ್ತು ಅವರ ಪತ್ನಿಗೆ ಉದ್ಯೋಗಾವಕಾಶ ನೀಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಆದರೆ, ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು.
Comments