ದ.ಕ: ಜಿಲ್ಲೆಯಲ್ಲಿ ಧಾರಾಕಾರ ಮಳೆ, ಜಲಾವೃತಗೊಂಡ ಬಪ್ಪನಾಡು ಕ್ಷೇತ್ರ
- DoubleClickMedia
- Jul 6, 2023
- 1 min read
ಮಂಗಳೂರು, ಜುಲೈ 6: ಜಿಲ್ಲೆಯಲ್ಲಿ ಗುರುವಾರ ಕೂಡಾ ಧಾರಾಕಾರ ಮಳೆಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡ ಕಾರಣ ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಶುಕ್ರವಾರ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಂಗಳೂರು ಸಮೀಪದ ಇತಿಹಾಸ ಪ್ರಸಿದ್ದ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಾಂಭವಿ ನದಿಯ ನೀರು ನುಗ್ಗಿದ್ದು, ವೀಡಿಯೋ ವೈರಲ್ ಆಗಿದೆ. ನೀರು ದೇವಸ್ಥಾನದ ಗರ್ಭಗುಡಿಯ ಮೆಟ್ಟಿಲಿನವರೆಗೂ ಬಂದಿದೆ.
ಮತ್ತೊಂದೆಡೆ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಉಲ್ಲಾಳ, ಸೋಮೇಶ್ವರ ಭಾಗದಲ್ಲಿ ಕಡಲ ಬದಿಯ ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಜಿಲ್ಲೆಯಲ್ಲಿ ಇದುವರೆಗೆ ಮಳೆಯಿಂದಾಗಿ 202 ವಿದ್ಯುತ್ ಕಂಬಗಳು, 6 ಟ್ರಾನ್ಸ್ಫಾರ‍್ಮರ‍್ ಗಳು ಮತ್ತು ಸುಮಾರು 9 ಕಿ.ಮೀ ಉದ್ದದಷ್ಟು ವಿದ್ಯುತ್ ತಂತಿಗಳು ಹಾನಿಗೀಡಾಗಿರುವುದಾಗಿ ಮೆಸ್ಕಾಂ ತಿಳಿಸಿದೆ. ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಹಿಂದೆ ಗಾಳಿ ಮಳೆಗೆ ಅನೇಕ ಫ್ಲೆಕ್ಸ್ ಗಳು ಕೆಳಗೆ ಬಿದ್ದು ಹಾನಿಯುಂಟಾಗಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜುಲೈ ಹತ್ತರವರೆಗೆ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದ್ದು, ಗಂಟೆಗೆ 40-45ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Comments