top of page
  • Writer's pictureDoubleClickMedia

ಇನ್ಮುಂದೆ ತಿರುಪತಿ ಲಡ್ಡುಗಳಲ್ಲಿ ನಂದಿನಿ ತುಪ್ಪದ ರುಚಿ ಇರಲ್ಲ


Thirupathiladdu

ಬೆಂಗಳೂರು, ಜು 31: ನಂದಿನಿ ತುಪ್ಪದ ರುಚಿಯನ್ನು ಇನ್ಮುಂದೆ ತಿರುಪತಿ ಲಡ್ಡುಗಳಲ್ಲಿ ಸವಿಯಲು ಸಾಧ್ಯವಿಲ್ಲ. ಸುಮಾರು 50 ವರ್ಷಗಳ ಬಳಿಕ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಕೆಎಂಎಫ್‌ನಿಂದ ನಂದಿನಿ ತುಪ್ಪದ ಖರೀದಿಯನ್ನು ಸ್ಥಗಿತಗೊಳಿಸಿದೆ. ಈ ಮೂಲಕ ಲಾಡುಗಳ ತಯಾರಿಕೆಯಲ್ಲಿ ನಂದಿನಿ ತುಪ್ಪದ ಬಳಕೆಯನ್ನು ಟಿಟಿಡಿ ನಿಲ್ಲಿಸಿದೆ.



ಈ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಭೀಮಾನಾಯ್ಕ್‌, ಕೆಎಂಎಫ್ ಸಲ್ಲಿಸಿರುವ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ಅದರ ಬದಲಾಗಿ ಬೇರೆ ಕಂಪನಿಯಿಂದ ತುಪ್ಪ ಖರೀದಿಸಲು ಟಿಟಿಡಿ ಮುಂದಾಗಿದೆ. ನಂದಿನಿ ತುಪ್ಪದಿಂದ ತಿರುಪತಿ ದೇವಸ್ಥಾನದಲ್ಲಿನ ಲಾಡುಗಳು ರುಚಿಯಾಗಿವೆ ಎಂದು ಟಿಟಿಡಿ ಹಲವು ಬಾರಿ ಹೇಳಿತ್ತು. ಹೀಗಿದ್ದರೂ ಸಹ ಕೆಎಂಎಫ್‌ ಮತ್ತು ಟಿಟಿಡಿ ನಡುವಿನ ತುಪ್ಪದ ಒಪ್ಪಂದಕ್ಕೆ ಅಂತ್ಯವಾಗಿದೆ ಎಂದಿದ್ದಾರೆ.



ಆಗಸ್ಟ್ 1 ರಿಂದ ಹಾಲಿನ ಬೆಲೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ತುಪ್ಪಕ್ಕೆ ಹೆಚ್ಚಿನ ಬೆಲೆ ನೀಡುವಂತೆ ಬೇಡಿಕೆ ಇಟ್ಟಿದ್ದೇವು. ಆದರೆ, ಟಿಟಿಡಿ ತುಪ್ಪ ಪೂರೈಸಲು ಇ-ಪ್ರೊಕ್ಯೂರ್‌ಮೆಂಟ್ ಸೈಟ್ ಮೂಲಕ ಕಡಿಮೆ ಬೆಲೆಯನ್ನು ನಮೂದಿಸಿದ ಕಂಪನಿಯನ್ನು ಆಯ್ಕೆ ಮಾಡಿದೆ. ಗುಣಮಟ್ಟದ ಕಾರಣದಿಂದ ನಂದಿನಿ ತುಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ. ಕಡಿಮೆ ಬೆಲೆಯಲ್ಲಿ ಬಿಡ್‌ ಮಾಡುವ ಕಂಪನಿ ತುಪ್ಪದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದು ಸ್ಪಷ್ಟ ಎಂಬುದು ಗೊತ್ತಾಗುತ್ತದೆ ಎಂದು ಭೀಮಾನಾಯ್ಕ್‌ ಹೇಳಿದ್ದಾರೆ.


ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ನೀಡಬೇಕು, ಈತನಕ ದೇವಸ್ಥಾನಕ್ಕೆಂದು ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಸಲ ಕೆಎಂಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ಟೆಂಡರ್​ ಅನ್ನು ಕೈಬಿಟ್ಟಿದೆ, ಕಡಿಮೆ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.




Comments


bottom of page