top of page
  • Writer's pictureDoubleClickMedia

ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ


ODI series

ಟ್ರಿನಿಡಾಡ್: ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭರ್ಜರಿ 200 ರನ್‌ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.



ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 351 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನತ್ತಿದ ವಿಂಡೀಸ್‌ 151 ರನ್‌ಗಳಿಗೆ ಆಲೌಟ್‌ ಆಯ್ತು. ಈ ಮೂಲಕ ತವರಿನಲ್ಲಿ ವಿಂಡೀಸ್‌ ಸತತ 6ನೇ ಸರಣಿ ಸೋತರೆ, ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ ಗೆದ್ದುಕೊಂಡಂತಾಗಿದೆ.


ತಂಡದ ಪರ ಆರಂಭಿಕ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ವಿಂಡೀಸ್ ಬೌಲಿಂಗ್​ ವಿಭಾಗದ ಮೇಲೆ ಆರಂಭದಲ್ಲೇ ಹಿಡಿತ ಸಾಧಿಸಿದ್ದರು. ಆರಂಭಿಕರಿಬ್ಬರೂ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ 19.4 ಓವರ್‌ಗಳಲ್ಲಿಯೇ ತಂಡದ ಮೊತ್ತವನ್ನು 143 ರನ್‌ಗಳ ಗಡಿ ದಾಟಿಸಿದರು. ಈ ಪಂದ್ಯದಲ್ಲಿ 77 ರನ್​ಗಳ ಇನ್ನಿಂಗ್ಸ್ ಆಡಿದ ಕಿಶನ್, ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಬರೆದರು. ನಂತರ ಸೂರ್ಯಕುಮಾರ್ ಯಾದವ್ (35) ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಜೊತೆಗೂಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಕೊನೆಯದಾಗಿ ತಂಡ 351 ರನ್ ಕಲೆ ಹಾಕಿತು.



351 ರನ್​ಗಳ ಗುರಿಯೊಂದಿಗೆ ಅಖಾಡಕ್ಕಿಳಿದ ವಿಂಡೀಸ್​ ಪಡೆ 12ನೇ ಓವರ್ ವೇಳೆಗೆ ವೆಸ್ಟ್ ಇಂಡೀಸ್ ತಂಡ 5 ವಿಕೆಟ್ ಕಳೆದುಕೊಂಡು ಕೇವಲ 40 ರನ್ ಗಳಿಸಿತ್ತು. ಅಂತಿಮವಾಗಿ ವಿಂಡೀಸ್ ತಂಡ 35.3 ಓವರ್‌ಗಳಲ್ಲಿ ಕೇವಲ 151 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಶಾರ್ದೂಲ್ 4, ಮುಖೇಶ್ 3 ಹಾಗೂ ಕುಲ್ದೀಪ್ 2 ವಿಕೆಟ್ ಪಡೆದು ಮಿಂಚಿದರು. ಶುಭಮನ್‌ ಗಿಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಇಶಾನ್‌ ಕಿಶನ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.





Comments


bottom of page