ಕೊಲ್ಲೂರು: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು
- DoubleClickMedia
- Jul 24, 2023
- 1 min read

ಉಡುಪಿ ಜು.24 : ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿದೆ.
ಅರಶಿನಗುಂಡಿ ಜಲಪಾತ ವೀಕ್ಷಿಸಲು ಬಂದ ಯುವಕ ರೀಲ್ಸ್ ಮಾಡುವಾಗ ಆಯತಪ್ಪಿ ಬಿದ್ದು ನೀರುಪಾಲಾಗಿರುವ ಘಟನೆ ನಡೆದಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಶರತ್ ಕುಮಾರ್ ಜಲಪಾತ ವೀಕ್ಷಣೆಗೆ ತೆರಳಿದ್ದರು. ಬಳಿಕ ಜಲಪಾತದ ಬಂಡೆಯ ತುದಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಆಯತಪ್ಪಿ ಧುಮ್ಮುಕ್ಕುತ್ತಿರುವ ಜಲಪಾತಕ್ಕೆ ಬಿದ್ದಿದ್ದಾರೆ.
ಇನ್ನು ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಜೊತೆಯಲ್ಲಿ ತೆರಳಿದ್ದ ಮತ್ತೋರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಮೃತದೇಹ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments