ಮೆಟ್ರೋದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು: ಅಧಿಕಾರಿಗಳ ವಿರುದ್ದ ಕೇಸು ದಾಖಲು
- DoubleClickMedia
- Jul 25, 2023
- 1 min read

ಜುಲೈ 20ರಂದು ಬೆಂಗಳೂರಿನ ಮೆಟ್ರೋ ರೈಲಿನಲ್ಲಿ 67 ವರ್ಷದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತರನ್ನು ತಿಮ್ಮೇಗೌಡ ಎಂದು ಗುರುತಿಸಲಾಗಿದ್ದು, ಕೆಂಗೇರಿಗೆ ತೆರಳುತ್ತಿದ್ದ ವೇಳೆ ರೈಲಿನೊಳಗೆ ಕುಸಿದು ಬಿದ್ದಿದ್ದಾರೆ. ಗುರುವಾರ ಬೆಳಗ್ಗೆ 9 ಗಂಟೆಗೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಇವರು ಮೆಟ್ರೋ ಹತ್ತಿದ್ದು, ಎಸ್ ವಿ ರಸ್ತೆ ನಿಲ್ದಾಣದಿಂದ ರೈಲು ಹೊರಟ ಬಳಿಕ ತಿಮ್ಮೇಗೌಡ ಕುಸಿದು ಬಿದ್ದಿದ್ದಾರೆ.
ಸಹ ಪ್ರಯಾಣಿಕರು ಪದೇ ಪದೇ ತುರ್ತು ಎಚ್ಚರಿಕೆಯ ಅಲರಾಂ ಪ್ರಯತ್ನಿಸಿದರೂ ಮೆಟ್ರೋ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಅವರು ಮಾರ್ಗದ ಮುಂದಿನ ನಿಲ್ದಾಣವಾದ ಎಂಜಿ ರಸ್ತೆ ನಿಲ್ದಾಣದಲ್ಲಿ ಅವರನ್ನು ಇಳಿಸಲು ನಿರ್ಧರಿಸಿದರು.
ತಿಮ್ಮೇಗೌಡ ಅವರ ಪುತ್ರ ಮುತ್ತುರಾಜ್ ಅವರ ಪ್ರಕಾರ, ಸಹ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿದ್ದ ಮೆಟ್ರೋ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸಹಾಯ ಪಡೆಯಲು ಪ್ರಯತ್ನಿಸಿದರು. ತಿಮ್ಮೇಗೌಡ ಅವರು ಸುಮಾರು 15-20 ನಿಮಿಷಗಳ ಕಾಲ ಯಾವುದೇ ಸಹಾಯವಿಲ್ಲದೆ ಫ್ಲ್ಯಾಟ್‌ಫಾರಂ ಮೇಲೆ ಮಲಗಿದ್ದರು. ಮುತ್ತುರಾಜ್ ಮನವಿಯ ಮೇರೆಗೆ ಸಹ ಪ್ರಯಾಣಿಕರೊಬ್ಬರು ಬೆಳಗ್ಗೆ 11.15ಕ್ಕೆ ತಿಮ್ಮೇಗೌಡರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಬೆಳಗ್ಗೆ 11.57ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ತನ್ನ ತಂದೆಯ ಮರಣದ ನಂತರ, ಮುತ್ತುರಾಜ್ ತನ್ನ ತಂದೆಗೆ ಸಕಾಲಿಕ ವೈದ್ಯಕೀಯ ನೆರವು ನೀಡಲು ನಿರ್ಲಕ್ಷ್ಯ ಮತ್ತು ವೈಫಲ್ಯವನ್ನು ಆರೋಪಿಸಿ BMRCL ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದರು. ಬೆಂಗಳೂರು ಮೆಟ್ರೋ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Comments