ಮಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಕೆಲಸಗಾರನನ್ನು ಜೀವಂತ ಸುಟ್ಟು ಕೊಲೆ
- DoubleClickMedia
- Jul 9, 2023
- 1 min read
ಮಂಗಳೂರು ಜುಲೈ 09: ಮಂಗಳೂರಿನ ಮುಳಿಹಿತ್ಲುವಿನಲ್ಲಿ ವ್ಯಕ್ತಿಯೋರ್ವ ತನ್ನ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ. ನಂತರ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದಾಗಿ ಸುಳ್ಳು ಹೇಳಿ ಇತರರನ್ನು ನಂಬಿಸಲು ಯತ್ನಿಸಿದ್ದಾನೆ. ಮೃತನನ್ನು 35 ವರ್ಷ ಪ್ರಾಯದ ಗಜ್ಞಾನ ಅಲಿಯಾಸ್ ಜಗ್ಗು ಎಂದು ಗುರುತಿಸಲಾಗಿದೆ. ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ನಲ್ಲಿರುವ ಜನರಲ್ ಸ್ಟೋರ್ ಹಿಂಭಾಗದಲ್ಲಿ ಈ ಘಟನೆ ನಡೆದಿದೆ

ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಘಟನೆಯ ಬಗ್ಗೆ ವಿವರಗಳನ್ನು ನೀಡಿದ್ದು, ಆರೋಪಿ ತೌಸಿಫ್ ಹುಸೇನ್ ಕ್ಷುಲ್ಲಕ ವಿಷಯಕ್ಕೆ ಗಜ್ಞಾನ ನನ್ನು ಕೊಂದಿದ್ದಾನೆ ಎಂದು ತಿಳಿಸಿದ್ದಾರೆ. 32 ವರ್ಷದ ತೌಸಿಫ್ ಹುಸೇನ್ ಎಂಬಾತ ಗಜ್ಞಾನ ಎಂಬ ವ್ಯಕ್ತಿಗೆ ಬೆಂಕಿ ಹಚ್ಚಿ ನಂತರ ಆತ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ. ಗಾಯಾಳುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾದರೂ ಕೂಡಾ ವೈದ್ಯರು ಪರೀಕ್ಷಿಸಿದಾಗ ಆತ ಮೃತಪಟ್ಟಿರುವುದು ದೃಢಪಟ್ಟಿದೆ.
ಸ್ಥಳೀಯ ನಿವಾಸಿಗಳ ವ್ಯಾಪಕ ವಿಚಾರಣೆಯ ನಂತರ ಪೊಲೀಸರು, ಕೊಲೆಗೆ ಸಂಬಂಧಿಸಿದಂತೆ ತೌಸಿಫ್ ಹುಸೇನ್ ನನ್ನು ಬಂಧಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸರು ತನಿಖೆಯನ್ನು ವಹಿಸಿಕೊಂಡಿದ್ದು, ಘಟನೆಯು ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು ಖಚಿತಪಡಿಸಿದ್ದಾರೆ. ತೌಸಿಫ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Comments