top of page

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ

  • Writer: DoubleClickMedia
    DoubleClickMedia
  • Jun 24, 2023
  • 1 min read

NalinKumarKateel

ಬಳ್ಳಾರಿ ಜೂ.24 : ರಾಜ್ಯದಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆ ವಿಚಾರ ಚರ್ಚೆಯಾಗುತ್ತಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಕುರಿತು ಮಾತುಗಳು ಕೇಳಿ ಬಂದಿದ್ದವು.



ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಈಗಾಗಲೇ ನನ್ನ ಸ್ಥಾನಕ್ಕೆ ಮೌಖಿಕವಾಗಿ ಹಾಗೂ ಲಿಖಿತವಾಗಿ ರಾಜೀನಾಮೆ ಸಲ್ಲಿಸಲಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಬಳ್ಳಾರಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.


ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಯಾವುದೇ ಕೂಗಿಲ್ಲ. ಆದರೇ ನನ್ನ ಎರಡು ವರ್ಷದ ಅವಧಿ ಮುಗಿದಿದೆ. ಹೀಗಾಗಿ ಸಹಜವಾಗಿಯೇ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು. ನಮ್ಮ ಪಕ್ಷದಲ್ಲಿ ಅಧ್ಯಕ್ಷರ ಅವಧಿ ಎರಡು ವರ್ಷ. ಆದರೆ ನಾನು ನಾಲ್ಕು ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.



ನಳಿನ್ ಕುಮಾರ‍್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದ ಎರಡು ವರ್ಷಗಳಲ್ಲಿ ಹಲವಾರು ಕಾರಣಗಳಿಗೆ ಸುದ್ದಿಯಾಗಿದ್ದರು. ರಾಜ್ಯಾಧ್ಯಕ್ಷರಾದ ಕೆಲ ಸಮಯದಲ್ಲೇ ಅವರದ್ದೆನ್ನಲಾದ ತುಳು ಭಾಷೆಯ ಆಡಿಯೋವೊಂದು ವೈರಲ್ ಆಗಿತ್ತು. ಕಳೆದ ವರ್ಷ ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದಲ್ಲಿ, ಬಿಜೆಪಿ ಕಾರ್ಯಕರ್ತರೇ ನಳಿನ್ ಕುಮಾರ‍್ ಕಟೀಲು ಅವರ ಕಾರನ್ನು ಅಲುಗಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.


ವೇದಿಕೆಯ ಮೇಲಿನ ಅವರ ಕೆಲವು ಹೇಳಿಕೆಗಳು ಪಕ್ಷಕ್ಕೂ ಮುಳುವಾಗಿದ್ದವು. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಅವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ವೇಳೆ ’ಇದು ಟಿಪ್ಪು ಮತ್ತು ಸಾವರ್ಕರ‍್’ ನಡುವಿನ ಯುದ್ದ ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ‍್ ಎನ್ನುವ ಅವರ ಹೇಳಿಕೆ ತೀವ್ರ ಠೀಕೆಗೆ ಗುರಿಯಾಗಿತ್ತು.



ಶೀಘ್ರದಲ್ಲೇ ನೂತನ ರಾಜ್ಯಾಧ್ಯಕ್ಷ ನೇಮಕ ಸಾಧ್ಯತೆ ಇದ್ದು, ಪ್ರಮುಖ ನಾಯಕರು ರೇಸ್​ನಲ್ಲಿ ಇದ್ದಾರೆ. ವಿ.ಸೋಮಣ್ಣ, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಆರ್.ಅಶೋಕ್, ಅಶ್ವತ್ಥ ನಾರಾಯಣ, ಸಿಟಿ ರವಿ, ವಿ. ಸುನಿಲ್ ಕುಮಾರ್, ಕೆ.ಎಸ್. ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ವರದಿಯಾಗಿದೆ.




Comentarios


bottom of page