top of page
  • Writer's pictureDoubleClickMedia

ಮಣಿಪುರ ಹಿಂಸಾಚಾರದ ನಡುವೆ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ


modi raising hand

ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಸಂಸದ ಗೌರವ್ ಗಗೋಯಿ ಪ್ರಧಾನಿ ಮೋದಿ ಸರ್ಕಾರದ ವಿರುದ್ದ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ವಿರೋಧ ಪಕ್ಷದ ನಾಯಕರ ಪ್ರಕಾರ, ಮಣಿಪುರದ ಪರಿಸ್ಥಿತಿಯನ್ನು, ವಿಶೇಷವಾಗಿ ಮೇನಲ್ಲಿ ಭುಗಿಲೆದ್ದ ಮೈತೆಯಿ ಮತ್ತು ಕುಕಿ ಅಲ್ಪಸಂಖ್ಯಾತರ ನಡುವಿನ ಜನಾಂಗೀಯ ಘರ್ಷಣೆಯನ್ನು ಪರಿಹರಿಸಲು ಮೋದಿಯವರ ಮೇಲೆ ಒತ್ತಡ ಹೇರುವುದು ಈ ನಿರ್ಣಯದ ಉದ್ದೇಶವಾಗಿದೆ.


ಹಿಂಸಾಚಾರದ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾರದ ಆರಂಭದಲ್ಲಿ ಹೇಳಿಕೆ ನೀಡಿದ್ದರು, ಆದರೆ ಪ್ರತಿಪಕ್ಷಗಳು ಅಂತಹ ಚರ್ಚೆಗಳಿಗೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದ್ದರು.


ಬುಧವಾರ, ಕಾಂಗ್ರೆಸ್ ಪಕ್ಷ ಮತ್ತು ಭಾರತ್ ರಾಷ್ಟ್ರ ಸಮಿತಿಯ ಸಂಸದರು ಎರಡು ಪ್ರತ್ಯೇಕ ನಿರ್ಣಯಗಳನ್ನು ಮಂಡಿಸಿದರು. ಕಾಂಗ್ರೆಸ್ ಪಕ್ಷದ ನಿರ್ಣಯವನ್ನು ಅಂಗೀಕರಿಸಿದ ಸ್ಪೀಕರ್ ಓಂ ಬಿರ್ಲಾ ಅವರು ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಮತದಾನದ ದಿನಾಂಕವನ್ನು ಘೋಷಿಸುವುದಾಗಿ ಭರವಸೆ ನೀಡಿದ್ದಾರೆ.



2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಸರ್ಕಾರವು ಎರಡನೇ ಬಾರಿಗೆ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದೆ. 2018 ರಲ್ಲಿ ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅವಿಶ್ವಾಸ ಮತವನ್ನು ಎದುರಿಸಬೇಕಾಗಿತ್ತು.



ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದಾಗಿದ್ದು ಅದನ್ನು ಅಂಗೀಕರಿಸಲು ಕನಿಷ್ಠ 50 ಶಾಸಕರ ಬೆಂಬಲದ ಅಗತ್ಯವಿರುತ್ತದೆ. ನಿರ್ಣಯವನ್ನು ಅಂಗೀಕರಿಸಿದ ನಂತರ, ಸ್ಪೀಕರ್ 10 ದಿನಗಳ ಒಳಗಾಗಿ ಮತದಾನವನ್ನು ನಿಗದಿಪಡಿಸುತ್ತಾರೆ. ಬಹುಮತ ಸಾಬೀತುಪಡಿಸಲು ಸರ್ಕಾರ ವಿಫಲವಾದಲ್ಲಿ ಅದು ರಾಜೀನಾಮೆ ನೀಡಬೇಕಾಗುತ್ತದೆ. . ಸದ್ಯ ಲೋಕಸಭೆಯಲ್ಲಿ ೫೪೩ ಸದಸ್ಯರಿದ್ದು. ಅವಿಶ್ವಾಸ ನಿರ್ಣಯಕ್ಕೆ ಗೆಲುವು ಸಿಕ್ಕಲು 272 ಮತಗಳ ಅಗತ್ಯವಿದೆ. ಆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು 332 ಸಂಸದರನ್ನು ಹೊಂದಿದ್ದು, ಬಿಜೆಪಿಯೊಂದೇ 301 ಸಂಸದರನ್ನು ಹೊಂದಿದೆ.


ಅವಿಶ್ವಾಸ ನಿರ್ಣಯ ಹೊರಬೀಳುತ್ತಿದ್ದಂತೆ, 2019 ರಲ್ಲಿ ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರು ಮಾಡಿದ್ದ ಟೀಕೆಗಳು ವೈರಲ್ ಆಗಿದೆ. ಅಂದು ಅವರು 2023 ರಲ್ಲಿ ಮತ್ತೊಂದು ಅವಿಶ್ವಾಸ ನಿರ್ಣಯಕ್ಕೆ ಸಿದ್ಧರಾಗುವಂತೆ ಪ್ರತಿಪಕ್ಷಗಳಿಗೆ ತಮಾಷೆಯಾಗಿ ಸವಾಲು ಹಾಕಿದ್ದರು. ಆದಾಗ್ಯೂ, ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಎನ್ ಡಿ ಎ ಯ ಪ್ರಬಲ ಬಹುಮತವನ್ನು ಗಮನಿಸಿದರೆ, ಮೋದಿ ಸರ್ಕಾರವು ಈ ಗೊತ್ತುವಳಿಯನ್ನು ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.


Comments


bottom of page