ತುಳು ರಾಜ್ಯದ ಅಧಿಕೃತ ಭಾಷೆಯಾಗುವ ಬಗ್ಗೆ ನಂಬಿಕೆಯಿದೆ: ಒಡಿಯೂರು ಶ್ರೀ
- DoubleClickMedia
- Jun 2, 2023
- 1 min read
ಮಂಗಳೂರು ಜೂನ್ 2, 2023 ಕರ್ನಾಟಕದ ಅಧಿಕೃತ ಭಾಷೆಯಾಗುವ ಬಗ್ಗೆ ನಂಬಿಕೆಯಿದ್ದು, ಸಂವಿಧಾನದ ಎಂಟನೇ ಪರಿಚ್ಛೇದಕ್ಕೂ ಸೇರಲಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಶ್ರೀಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ, ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಶ್ರಯದಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ವೆಬಿನಾರ್ ಗಳ ಸಂಗ್ರಹ 'ಗೇನದ ಗೆಜ್ಜೆ-ನೂದನೇ ಪಜ್ಜೆ', ಶ್ರೀ ಮಂಜುನಾಥೇಶ್ವರ ತುಳು ಪೀಠದ ಮೂವತ್ತನೇ ವರ್ಷದ ನೆನಪಿನ ಸಂಚಿ 'ತ್ರಿಂಶತಿ ತಿರುಳು' ಮತ್ತು ಶುಭಾಶಯ ಜೈನ್ ಬರೆದ ತುಳು ಯಕ್ಷಗಾನ ಪ್ರಸಂಗ 'ಅಪ್ಪೆ ಅಂಜನೆ' ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಸದಸ್ಯರಿಂದ 'ಅಪ್ಪೆ ಅಂಜನೆ' ಯಕ್ಷಗಾನ ಪ್ರಸಂಗದ ಚೊಚ್ಚಲ ಪ್ರದರ್ಶನ ನಡೆಯಿತು. ಜೊತೆಗೇ ಜೈ ಗುರುದೇವ ಕಲಾ ಕೇಂದ್ರದ ಮಕ್ಕಳಿಂದ ಜಾನಪದ ಕುಣಿತ ಕಾರ್ಯಕ್ರಮ ಜನಮನ ಸೆಳೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀದೇವಿ ಆರ್ ಅಧ್ಯಕ್ಷತೆ ವಹಿಸಿದ್ದರು. ನೂಪುರ ಯಕ್ಷೋತ್ಥಾನ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಗೋವಿಂದ ವಂಡಾರು, ಬೆಂಕಿನಾಥೇಶ್ವರ ಯಕ್ಷಗಾನ ಮಂಡಲಿಯ ಸುರೇಂದ್ರ ಮಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ.ಮಾಧವ ಎಂಕೆ ಪ್ರವೀಣ್‌ಕುಮಾರ್ ಕೊಡಿಯಾಲ್ ಬೈಲ್, ಕದ್ರಿ ನವನೀತ ಶೆಟ್ಟಿ, ಅಣ್ಣಯ್ಯ ಕುಲಾಲ್,ಸುಭಾಶ್ಚಂದ್ರ ಕಣ್ವತೀರ್ಥ, ಕುಶಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಮೊದಲಾದವರು ಉಪಸ್ಥಿತರಿದ್ದರು., ಮುಂತಾದವರು ಉಪಸ್ಥಿತರಿದ್ದರು. ತುಳು ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿಯರಾದ ಜಯಲಕ್ಷ್ಮಿ ಆರ್ ಶೆಟ್ಟಿ ಸ್ವಾಗತಿಸಿದರು, ಗೀತಾ ಜೈನ್ ವಂದನಾರ್ಪಣೆ ಸಲ್ಲಿಸಿದರು. ದ್ವಿತೀಯ ವರ್ಷದ ತುಳು ಎಂ ಎ ವಿದ್ಯಾರ್ಥಿನಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Commenti