top of page
  • Writer's pictureDoubleClickMedia

ಅಂಗಾಂಗದಾನ ಕ್ಯಾಂಪೇನ್: ರಾಯಭಾರಿಯಾಗಲು ಅಶ್ವಿನಿ ಪುನೀತ್ ಗೆ ಆಹ್ವಾನ



ಬೆಂಗಳೂರು ಜು.24 : ರಾಜ್ಯದಲ್ಲಿ ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ. ಅಗಸ್ಟ್ 3 ರಂದು ಅಂಗಾಂಗ ದಾನ ದಿನಾಚರಣೆಗೆ ಆಚರಿಸುತ್ತಿರುವ ರಾಜ್ಯ ಆರೋಗ್ಯ ಇಲಾಖೆ, ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳನ್ನ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ನೀಡಲಾಗಿದೆ.



ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರು ನೇತ್ರದಾನ ಮಾಡಿದ್ದರು. ಕಣ್ಣಿನ ದಾನ ಮಾಡುವಂತೆ ಅವರು ಅನೇಕರಿಗೆ ಸ್ಫೂರ್ತಿ ನೀಡಿದ್ದಾರೆ. ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರನ್ನು ಅನುಸರಿಸಿ ಅನೇಕರು ಕಣ್ಣಿನ ದಾನ ಮಾಡಲು ಹೆಸರು ನೋಂದಣಿ ಮಾಡಿಸಿದ್ದರು. ಈ ಕಾರಣದಿಂದ ಅಶ್ವಿನಿ ಪುನೀತ್ ಅವರಿಗೆ ‘ಅಂಗಾಂಗದಾನ ಕ್ಯಾಂಪೇನ್​’ನ ರಾಯಭಾರಿ ಆಗುವಂತೆ ಆಹ್ವಾನ ನೀಡಲಾಗಿದೆ.



ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇದರಲ್ಲಿ ಅವರು ರಾಜ್​ಕುಮಾರ್ ಕುಟುಂಬದ ಕೊಡುಗೆಯನ್ನು ಸ್ಮರಿಸಿದ್ದಾರೆ ‘ರಾಜ್​ಕುಮಾರ್ ಹಾಗೂ ಅವರ ಕಿರಿಮಗ ಪುನೀತ್ ರಾಜ್​ಕುಮಾರ್ ಅವರು ಮರಣಾನಂತರ ಕಣ್ಣುಗಳನ್ನು ದಾನ ಮಾಡಿ ಮಾದರಿ ಆದರು. ಅನೇಕರು ಇವರನ್ನು ಅನುಕರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದ ಆರೋಗ್ಯ ಇಲಾಖೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಅಂಗಾಂಗದಾನ ದಾನ ಕ್ಯಾಂಪೇನ್​ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ನಿರ್ಧರಿಸಿದೆ’ ಎಂದು ಗುಂಡೂರಾವ್ ಅವರು ತಿಳಿಸಿದ್ದಾರೆ.




Comments


bottom of page