ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ತಾತ್ಕಾಲಿಕ ತಡೆ
- DoubleClickMedia
- Jul 24, 2023
- 1 min read

ಲಖನೌ ಜು.24 : ವಾರಾಣಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಜುಲೈ 26ರವರೆಗೆ ಸಮೀಕ್ಷೆ ನಡೆಸದಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಲಾಗಿದೆ. ಬುಧವಾರ ಸಂಜೆ 5 ಗಂಟೆವರೆಗೆ ಮಸೀದಿ ಸರ್ವೆಗೆ ಸುಪ್ರೀಂ ತಡೆ ನೀಡಿದೆ. ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಮಸೀದಿ ಕಮಿಟಿಗೆ ಸೂಚನೆ ನೀಡಲಾಗಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ನೀಡಿದ ಆದೇಶದ ಮೇರೆಗೆ ವೈಜ್ಞಾನಿಕ ಸಮೀಕ್ಷೆಯನ್ನು ಬೆಳಗ್ಗೆ ಇಂದು 7 ಗಂಟೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆರಂಭಿಸಿತ್ತು. ವೈಜ್ಞಾನಿಕ ಸಮೀಕ್ಷೆಗೆ ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳುವ ಮಹಿಳೆಯರ ಗುಂಪಿನ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದ ಸಮೀಕ್ಷೆಗೆ ಆದೇಶ ಬಂದಿತ್ತು. ಆದರೆ ಇದೀಗ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ಗೆ ತೆರಳಲು ಮಸೀದಿ ಸಮಿತಿಗೆ ಜುಲೈ 26ರವರೆಗೆ ಕಾಲಾವಕಾಶ ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಅಲ್ಲಿಯವರೆಗೆ ಸ್ಥಳದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.
ಪುರಾತನ ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ನಂತರ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಬಗ್ಗೆ ಸಂಪೂರ್ಣ ಸತ್ಯವನ್ನು ಹೊರತರಲು ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದಿದ್ದರು. ಆದರೆ ಜ್ಞಾನವಾಪಿ ಮಸೀದಿಯ ಸಿಬ್ಬಂದಿ ಶಿವಲಿಂಗದ ರಚನೆಯು ವಝುಖಾನಾದಲ್ಲಿ ಕಾರಂಜಿಯ ಒಂದು ಭಾಗವಾಗಿದೆ ಎಂದು ಹೇಳಿದ್ದರು. ವಿಚಾರಣೆಯ ಭಾಗವಾಗಿ ವೈಜ್ಞಾನಿಕ ತನಿಖೆ ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
Comments