top of page
  • Writer's pictureDoubleClickMedia

ಪ್ರವೀಣ್ ನೆಟ್ಟಾರು ಪತ್ನಿಯ ನೇಮಕಾತಿ ಆದೇಶವನ್ನು ಹಿಂಪಡೆದ ನೂತನ ಸರ್ಕಾರ.

ಮೇ 27, 2023: ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಅವರ ಪತ್ನಿ ನೂತನ್ ಕುಮಾರಿ ಅವರ ತಾತ್ಕಾಲಿಕ ನೇಮಕಾತಿ ಆದೇಶವನ್ನು ನೂತನ ಕಾಂಗ್ರೆಸ್ ಸರಕಾರವು ಹಿಂಪಡೆದಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಗ್ರೂಪ್ ಸಿ ಹುದ್ದೆಯನ್ನು ನೀಡಿದ್ದ ನೇಮಕಾತಿ ಆದೇಶವನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.


ನೇಮಕದ ಪ್ರಕಾರ ನೂತನ್ ಕುಮಾರಿ ತಮ್ಮ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರ ಬಳಿ ಮಂಗಳೂರಿನಲ್ಲಿ ಕೆಲಸ ಮಾಡುವ ಒಲವು ವ್ಯಕ್ತಪಡಿಸಿದ್ದರು. ನಂತರ ಆಕೆಯ ಮನವಿಗೆ ಮನ್ನಣೆ ನೀಡಿ, ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಸಹಾಯಕಿಯಾಗಿ ನಿಯೋಜನೆ ಮಾಡಲಾಗಿತ್ತು.


ಬಿಜೆಪಿಯು ಈ ಕ್ರಮವನ್ನು ಖಂಡಿಸಿದೆ. ಆದರೆ, ಸರ್ಕಾರ ಬದಲಾದಂತೆ ತಾತ್ಕಾಲಿಕ ಸಿಬ್ಬಂದಿಯನ್ನು ಬದಲಾಯಿಸುವುದು ವಾಡಿಕೆಯಾಗಿದ್ದು, ನೂತನ್ ಕುಮಾರಿ ಪ್ರಕರಣವೂ ಈ ಪ್ರಕ್ರಿಯೆಯಿಂದ ಹೊರತಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅವರ ಉದ್ಯೋಗವು ಮುಖ್ಯಮಂತ್ರಿ ಅಧಿಕಾರಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ ಎಂದು ಅವರ ಉದ್ಯೋಗ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.


ಪ್ರವೀಣ್ ಕುಮಾರ್ ನೆಟ್ಟಾರು ಅವರ ಕೊಲೆ ಜುಲೈ 26, 2022 ರಂದು ನಡೆದಿದ್ದು, ಪ್ರಸ್ತುತ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯು ಇದು ಪ್ರತೀಕಾರದ ಕೊಲೆ ಎಂದು ಸೂಚಿಸಿದೆ. ಈ ಕೊಲೆಗೆ ಸಂಬಂಧಿಸಿದಂತೆ ಈವರೆಗೆ 10 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಬಂಧಿಸಲಾಗಿದೆ.


ಘಟನೆಯ ನಂತರ, ಹಿಂದೂ ಕಾರ್ಯಕರ್ತರು ನೂತನ್ ಕುಮಾರಿ ಅವರಿಗೆ ಸರ್ಕಾರಿ ನೌಕರಿ ನೀಡುವಂತೆ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದರು. ಜೊತೆಗೆ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಮೂಲಕ ಮನೆ ನಿರ್ಮಿಸಿಕೊಡಲಾಗಿತ್ತು.

Comments


bottom of page