ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಲೇ ಲಂಚದ ಹಣ ನುಂಗಿದ ಅಧಿಕಾರಿ
- DoubleClickMedia
- Jul 25, 2023
- 1 min read

ಭೋಪಾಲ್ ಜು.25 : ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಅವರು ಲಂಚವಾಗಿ ಸ್ವೀಕರಿಸಿದ 5,000 ರೂ. ಹಣವನ್ನು ಜಗಿದು ನುಂಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಕಟ್ನಿಯಲ್ಲಿ ಸೋಮವಾರ ಜಬಲ್ಪುರ ಲೋಕಾಯುಕ್ತದ ವಿಶೇಷ ಪೊಲೀಸ್ ಘಟಕವು (ಎಸ್‌ಪಿಇ) ಲಂಚ ತೆಗೆದುಕೊಳ್ಳುತ್ತಿದ್ದ ಕಂದಾಯ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಕೂಡಲೇ ಆತ ಕರೆನ್ಸಿ ನೋಟುಗಳನ್ನು ಬಾಯಿಗೆ ತುರುಕಿಕೊಂಡು ಜಗಿದು ಗಬಗಬನೆ ನುಂಗಿದ್ದಾರೆ.
ಪಟ್ವಾರಿಯಾಗಿರುವ ಗಜೇಂದ್ರ ಸಿಂಗ್ ಎಂಬ ಅಧಿಕಾರಿ, ಜಮೀನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರ ಚಂದನ್ ಸಿಂಗ್ ಲೋಧಿಯಿಂದ 5 ಸಾವಿರ ರೂ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಲೋಧಿ ಅವರು ಜಬಲ್ಪುರ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಜಬಲ್ಪುರದ ಲೋಕಾಯುಕ್ತ ಪೊಲೀಸರ ತಂಡ ಗಜೇಂದ್ರ ಸಿಂಗ್ ಖಾಸಗಿ ಕಚೇರಿಗೆ ತಲುಪಿದೆ. ಗಜೇಂದ್ರ ಸಿಂಗ್ ಲೋಧಿ ಅವರಿಂದ ಲಂಚವನ್ನು ಸ್ವೀಕರಿಸುತ್ತಲೇ ದಾಳಿ ನಡೆಸಿ ಕಂದಾಯ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆದರೆ ಈ ವೇಳೆ ಗಜೇಂದ್ರ ಸಿಂಗ್ ತಾನು ಸ್ವೀಕರಿಸಿದ 5,000 ರೂ. ಮೊತ್ತದ ಲಂಚವನ್ನು ಜಗಿದು ನುಂಗಿದ್ದಾರೆ. ತಕ್ಷಣವೇ ಗಜೇಂದ್ರ ಸಿಂಗ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಾಕಷ್ಟು ಪ್ರಯತ್ನಗಳ ನಂತರ ಲಂಚದ ನೋಟುಗಳನ್ನು ಅವರ ಬಾಯಿಯಿಂದ ತಿರುಳಿನ ರೂಪದಲ್ಲಿ ಹೊರತೆಗೆಯಲಾಗಿದೆ. ಸದ್ಯ ಗಜೇಂದ್ರ ಸಿಂಗ್ ಆರೋಗ್ಯ ಸ್ಥಿರವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments