ಉಡುಪಿ ಕಾಲೇಜ್ ಟಾಯ್ಲೆಟ್ ವಿಡಿಯೋ ಪ್ರಕರಣ: ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್
- DoubleClickMedia
- Jul 26, 2023
- 1 min read

ಉಡುಪಿ, ಜು 26: ಉಡುಪಿಯ ನೇತ್ರ ಜ್ಯೋತಿ ಕಾಲೇಜಿನ ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮಲ್ಪೆ ಪೋಲಿಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.
ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾದ ಶಬನಾಝ್, ಅಲ್ಛೀಯಾ ಮತ್ತು ಅಲೀಮಾ ಅವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಸುಷ್ಮಾ ಜಿ.ಬಿ ಅವರು ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದಾರೆ.
ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿರುವ ಕೃತ್ಯ, ಅರಿವಿಗೆ ಬಾರದಂತೆ ವಿಡಿಯೋ ಮಾಡುವ ಕೃತ್ಯ, ಜೊತೆಗೆ ದಾಖಲೆ ನಾಶ ವಿಚಾರ, ಸಾಕ್ಷ್ಯ ನಾಶ, ಉದ್ದೇಶ ಪೂರ್ವಕವಾಗಿ ಸೂಕ್ತ ದಾಖಲೆ ನೀಡದಿರುವುದು ಹಾಗೂ ಸಾಮೂಹಿಕವಾಗಿ ಮಾಡಿರುವ ಕೃತ್ಯ ಆರೋಪಗಳ ಮೇಲೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿಚಾರವಾಗಿ ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜು ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಖಾಸಗಿತನಕ್ಕೆ ಧಕ್ಕೆ ಆಗುವ ವಿಡಿಯೋ ಚಿತ್ರೀಕರಣ ಆಗಿದೆ. ವಿಷಯ ತಿಳಿದು ವಿಡಿಯೋ ಡಿಲೀಟ್ ಮಾಡಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಇದೊಂದು ಗಂಭೀರವಾದ ಅಪರಾಧ ಕೃತ್ಯವಾಗಿದೆ. ವಿಡಿಯೋ ಮಾಡಿ ತಪ್ಪು ಒಪ್ಪಿಕೊಂಡಿರುವ ಬಗ್ಗೆ ಆಡಳಿತ ಮಂಡಳಿ ಹೇಳಿದೆ. ಸತ್ಯಾಸತ್ಯತೆ ಪತ್ತೆ ಹಚ್ಚುವ ಉದ್ದೇಶದಿಂದ ಮಲ್ಪೆ ಎಸ್.ಐ ಸುಷ್ಮಾ ಜಿ.ಬಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂದೇ ಖುಷ್ಬೂ ಸುಂದರ್ ಉಡುಪಿಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ.
Comentários