ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: ಸಿಐಡಿ ತನಿಖೆಗೆ ರಾಜ್ಯಸರ್ಕಾರ ಆದೇಶ
- DoubleClickMedia
- Aug 7, 2023
- 1 min read

ಉಡುಪಿ, ಆಗಸ್ಟ್ 7: ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ.
ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣ ಜುಲೈ 18 ರಂದು ಬೆಳಕಿಗೆ ಬಂದಿತ್ತು. ವಿದ್ಯಾರ್ಥಿನಿಯರು ಪ್ರತಿಭಟಿಸಲು ಆರಂಭಿಸಿದಾಗ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ವಿದ್ಯಾರ್ಥಿನಿಯ ಪ್ರತಿಭಟನೆ ಮಾಡಿದ್ದರು. ಇವರ ಬೆಂಬಲಕ್ಕೆ ಎಬಿವಿಪಿ ಮತ್ತು ಬಿಜೆಪಿ ಬಂದಿತ್ತು.
ಭಾರೀ ಪ್ರತಿಭಟನೆ ಹಿನ್ನೆಲೆ ಜುಲೈ 26ರಂದು ಮೂವರು ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣವನ್ನು ದಾಖಲಿಸಲಾಗಿತ್ತು. ಆ ನಂತರ ಮೂವರು ವಿದ್ಯಾರ್ಥಿನಿರು ಜಾಮೀನನ್ನು ಕೂಡ ಪಡೆದಿದ್ದರು. ಅದಾದ ಬಳಿಕ ತನಿಖಾಧಿಕಾರಿಯನ್ನು ಕೂಡ ಬದಲಾಯಿಸಿ, ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ಕೂಡ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಉಡುಪಿಗೆ ಎರಡು ದಿನ ಭೇಟಿ ನೀಡಿ ತನಿಖೆ ನಡೆಸಿದ್ದರು.
ಇದೀಗ ರಾಜ್ಯ ಸರ್ಕಾರ ಸೋಮವಾರ , ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದೆ. ಈ ಹಿನ್ನೆಲೆ ಸಿಐಡಿ ಪೊಲೀಸ್ ತಂಡವು ಮಂಗಳವಾರ ಉಡುಪಿಗೆ ಆಗಮಿಸಿ, ಎಸ್‌ಪಿ ಹಾಗೂ ತನಿಖಾಧಿಕಾರಿ ಜೊತೆ ಚರ್ಚಿಸಿ ಎಲ್ಲ ದಾಖಲೆಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ.
תגובות