ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ: ವಿದ್ಯಾರ್ಥಿಗಳ ಪ್ರತಿಭಟನೆ
- DoubleClickMedia
- Jul 27, 2023
- 1 min read

ಉಡುಪಿ, ಜುಲೈ 27: ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಉಡುಪಿಗೆ ಆಗಮಿಸಿದ್ದಾರೆ. ಉಡುಪಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರಕರಣದ ವಿಚಾರವಾಗಿ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಸಂತ್ರಸ್ತೆ ವಿಧ್ಯಾರ್ಥಿನಿಗೆ ನ್ಯಾಯ ಒದಗಿಸಿ ಕೊಡಬೇಕು ಪಟ್ಟು ಹಿಡಿದಿದ್ದಾರೆ.
ಇನ್ನು ಮತ್ತೊಂದೆಡೆ ಉಡುಪಿ ಘಟನೆಯನ್ನು ಖಂಡಿಸಿ ಬೆಂಗಳೂರಿನಲ್ಲೂ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸುತ್ತಿದ್ದು ಗೃಹ ಸಚಿವ ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದೆ. ಈ ಹಿನ್ನೆಲೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆ ಸುತ್ತಮುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಸದಾಶಿವನಗರದ ನಿವಾಸದ ರಸ್ತೆಗೆ ಬ್ಯಾರಿಕೇಟ್ ಹಾಕಿದ್ದು ನಿವಾಸಕ್ಕೆ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಸ್ಪಷ್ಟನೆ ನೀಡಿದ ಗೃಹಸಚಿವರು:
ಉಡುಪಿಯಲ್ಲಿ ವಿಡಿಯೋ ಚಿತ್ರೀಕರಣ ಮಕ್ಕಳ ಆಟ ಅಂತಾ ಹೇಳಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಸ್ನೇಹಿತರ ಮಧ್ಯೆ ಘಟನೆಗಳು ನಡೆಯುತ್ತೆ, ಅದು ಅಲ್ಲಿಗೆ ಮುಗಿಯುತ್ತೆ ಎಂದು ಹೇಳಿದ್ದು ಎಂದಿದ್ದಾರೆ. ಪ್ರಕರಣದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಇದಕ್ಕೆ ಮಧ್ಯಪ್ರವೇಶಿಸಲ್ಲ, ಅವರೇ ದೂರು ದಾಖಲಿಸುತ್ತಾರೆ. ಇದನ್ನ ಬೇರೆ ರೀತಿ ಬಿಂಬಿಸುವುದು, ಪೊಲೀಸರ ಮೇಲೆ ಬೊಟ್ಟು ತೋರಿಸುವುದು ಮಾಡಬಾರದು. ಈಗಾಗಲೇ ಸಸ್ಪೆಂಡ್ ಮಾಡಿದ್ದಾರೆ, ಹೆಚ್ಚಿನ ಕ್ರಮ ಅವರಿಗೆ ಬಿಟ್ಟಿದ್ದು. ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಎಲ್ಲವೂ ಹೊರಬರಲಿದೆ ಎಂದಿದ್ದಾರೆ.
Comments