top of page
  • Writer's pictureDoubleClickMedia

ಆರೋಗ್ಯಕರ ಜೀವನಕ್ಕೆ ಮಹಿಳೆಯರಿಗೆ ಯಾವ ಯೋಗಾಸನಗಳು ಸೂಕ್ತ?


Yoga

ಇಂದಿನ ಜಂಜಾಟ ಬದುಕಿನಲ್ಲಿ ಮಹಿಳೆ ತನ್ನ ದೇಹದ ಆರೋಗ್ಯ ಮನಸ್ಸಿನ ಆರೋಗ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿಬಿಟ್ಟಿದ್ದಾಳೆ. ಜೀವನದಲ್ಲಿ ಬರುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಮಹಿಳೆಗೆ ಯೋಗ ಸಹಕಾರಿ. ಆಧುನಿಕ ಜೀವನ ಶೈಲಿಯಲ್ಲಿ ಮಹಿಳೆಯರಿಗೆ ದೈಹಿಕ ವ್ಯಾಯಾಮದ ಕೊರತೆ ಹಾಗೂ ಆರೋಗ್ಯ ಸಮಸ್ಯೆ ಗಳು ಕಾಡುವುದು ಸಹಜ. ಇವನ್ನು ನಿವಾರಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಯೋಗಾಸನಗಳು ಸಹಕಾರಿ. ಮಹಿಳೆಯರ ಆರೋಗ್ಯ ಪಾಲನೆಗಾಗಿ ಇರುವ ಕೆಲವೊಂದು ಪ್ರಮುಖವಾದ ಯೋಗಾಭ್ಯಾಸಗಳು ಆಸನಗಳ ಬಗ್ಗೆ ಇಲ್ಲಿದೆ ಮಾಹಿತಿ.



ತಾಡಾಸನ:



ಮೊದಲು ಕಾಲಿನ ಮೇಲೆ ನೇರವಾಗಿ ನಿಲ್ಲಿ, ಪಾದಗಳು ಜತೆಯಾಗಿರಲಿ. ಹಿಂಗಾಲು ಸ್ವಲ್ಪ ದೂರವಾಗಿರಲಿ. ಕೈಗಳನ್ನು ನೇರವಾಗಿ ದೇಹದ ಎರಡು ಬದಿಯಲ್ಲಿ ಇಡಿ. ತೊಡೆಯ ಸ್ನಾಯುಗಳನ್ನು ಬಿಗಿಯಾಗಿಸಿ. ಮೊಣಕಾಲುಗಳನ್ನು ಸ್ವಲ್ಪ ಎತ್ತಿ. ಆದರೆ ಇದು ಹೊಟ್ಟೆಯ ಕೆಳಭಾಗಕ್ಕೆ ಹೆಚ್ಚು ಭಾರ ಹಾಕಬಾರದು ಎಂದು ನೆನಪಿಡಿ. ಕಣಕಾಲುಗಳ ಮೂಲಕ ಬಿಳಿ ಬೆಳಕು ಒಳಭಾಗದ ತೊಡೆ, ತೊಡೆಸಂಧು, ಬೆನ್ನಹುರಿ, ಕುತ್ತಿಗೆ ಹೀಗೆ ಹಾದು ತಲೆಗೆ ಹೋಗುವುದು ಎಂದು ಭಾವಿಸಿ. ಮೇಲ್ಭಾಗದ ತೊಡೆಯನ್ನು ಒಳಭಾಗಕ್ಕೆ ತನ್ನಿ. ಮೂಳೆತುದಿಯು ನೆಲವನ್ನು ನೋಡುವಂತೆ ಇರಲಿ. ನೇರವಾಗಿ ನೋಡುತ್ತಲಿರಿ.

ಭುಜಗಳು, ಕೈಗಳು ಮತ್ತು ಎದೆಯನ್ನು ಬಿಗಿಯಾಗಿಸಿ ಉಸಿರಾಡಿ. ದೇಹದಲ್ಲಿ ಬಿಗಿತ್ವವನ್ನು ಕಾಲಿನಿಂದ ತಲೆಯ ತನಕ ನೀವು ಅನುಭವಿಸಿ. ಹೀಗೆ ಕೆಲವು ಸೆಕೆಂಡುಗಳ ಕಾಲ ಇರಿ. ಇದರ ಬಳಿಕ ಉಸಿರು ಬಿಟ್ಟು ಆರಾಮ ಮಾಡಿ.



ಬದ್ಧ ಕೋನಾಸನ:



ಮೊದಲು ನೇರವಾಗಿ ಕುಳಿತುಕೊಂಡು ಎರಡು ಕಾಲುಗಳನ್ನು ಮಡಿಸಿ ತೊಡೆಯ ಹತ್ತಿರಕ್ಕೆ ತೆಗೆದುಕೊಳ್ಳಿ. ತೊಡೆಯ ಮೂಲದ ಹತ್ತಿರ ಹಿಮ್ಮಡಿಗಳು ಬರಬೇಕು. ಎರಡು ಪಾದಗಳ ಅಂಗಾಲುಗಳನ್ನು ಮೇಲ್ಮುಖವಾಗಿ ತಿರುಗಿಸಬೇಕು. ಎರಡು ತೊಡೆಗಳು ಮತ್ತು ಮಂಡಿಗಳು ನೆಲಕ್ಕೆ ತಾಗಿರಬೇಕು. ಬೆನ್ನು ನೇರವಾಗಿರಬೇಕು. ದೃಷ್ಟಿ ನೇರವಾಗಿರಬೇಕು. ನಂತರ ಕೈಗಳನ್ನು ಬಿಟ್ಟು ನಿಧಾನವಾಗಿ ಕಾಲುಗಳನ್ನು ಮುಂದೆ ಚಾಚಿ.



ವೃಕ್ಷಾಸನ:



ಮೊದಲು ಸಮಸ್ಥಿತಿಯಲ್ಲಿ ನಿಲ್ಲಿ. ಈಗ ಬಲಗಾಲನ್ನು ಮೇಲೆ ತೆಗೆದುಕೊಳ್ಳಿ. ಎಡ ತೊಡೆಯ ಮೂಲಕ್ಕೆ ಬಲ ಹಿಮ್ಮಡಿಯನ್ನು ತಾಗಿಸಿ. ಕಾಲು ಬೆರಳುಗಳು ಕೆಳಮುಖವಾಗಿರಬೇಕು. ಮಂಡಿ ಸೊಂಟದ ನೇರಕ್ಕೆ ಇರಬೇಕು. ಎಡ ತೊಡೆಯಿಂದ ಬಲ ಪಾದವನ್ನು, ಬಲ ಪಾದದಿಂದ ಎಡ ತೊಡೆಯನ್ನು ಒಂದಕ್ಕೊಂದು ಒತ್ತುತ್ತಿರಬೇಕು. ಈಗ ಎರಡೂ ಕೈಗಳನ್ನು ನಿಧಾನವಾಗಿ ಮೇಲಕ್ಕೆ ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖ ಮಾಡಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳು ಮೇಲೆ ನಮಸ್ಕಾರ ಸ್ಥಿತಿಯಲ್ಲಿರಲಿ. ದೃಷ್ಟಿ ನೇರವಾಗಿರಲಿ. ಈ ಸ್ಥಿತಿಯಲ್ಲಿ ಉಸಿರಾಟ ಸಹಜವಾಗಿರಲಿ. ಹಾಗೆ ನಿಧಾನವಾಗಿ ಕೈಗಳನ್ನು ಕೆಳಗಡೆ ಇಳಿಸಿ. ಎರಡೂ ಕೈಗಳನ್ನು ಸೊಂಟದ ಮೇಲೆ ತಂದ ನಂತರ ಬಲಪಾದವನ್ನು ಕೆಳಗಿಳಿಸಿ. ಇದೇ ರೀತಿ ಎಡಗಾಲಿನಿಂದ ಆಸನವನ್ನು ಮುಂದುವರೆಸಿ.



ವೀರಭದ್ರಾಸನ:



ಮೊದಲು ಕಾಲುಗಳನ್ನು 3-4 ಅಡಿ ಅಗಲವಾಗಿಸಿಕೊಂಡು ನೇರವಾಗಿ ನಿಲ್ಲಿ. ಬಲದ ಕಾಲನ್ನು 90 ಡಿಗ್ರಿ ಮತ್ತು ಎಡ ಕಾಲನ್ನು 15 ಡಿಗ್ರಿಯಲ್ಲಿ ಇಡಬೇಕು. ಬಲಕಾಲಿನ ಹಿಂಗಾಲು ಎಡಕಾಲಿನ ಪಾದದ ಮಧ್ಯಭಾಗಕ್ಕೆ ನೇರವಾಗಿರಬೇಕು. ಅಂಗೈಯು ಪರಸ್ಪರ ಎದುರಾಗುವಂತೆ ನೀವು ಎರಡು ಕೈಗಳನ್ನು ಹಾಗೆ ಮೇಲಕ್ಕೆತ್ತಿಕೊಳ್ಳಿ. ಕೈಗಳು ನೆಲಕ್ಕೆ ನೇರವಾಗಿ ಇರಬೇಕು. ಉಸಿರನ್ನು ಬಿಡಿ ಮತ್ತು ಬಲದ ಮೊಣಕಾಲನ್ನು ಬಗ್ಗಿಸಿ. ಮೊಣಕಾಲುಗಳು ಹಿಂಗಾಲನ್ನು ಹಿಂದಿಕ್ಕಿ ಹೋಗದಂತೆ ನೋಡಿಕೊಳ್ಳಿ. ತಲೆಯನ್ನು ನೇರವಾಗಿಸಿಕೊಂಡು ಬಲಕ್ಕೆ ನೋಡಿ. ಇದೇ ಭಂಗಿಯಲ್ಲಿ ನೀವು ಕೈಗಳನ್ನು ಆಗಿ ಎಳೆದುಕೊಳ್ಳಿ. ಶ್ರೋಣಿಯನ್ನು ನೀವು ಕೆಳಗೆ ಒತ್ತಲು ಪ್ರಯತ್ನಿಸಿ. ಯೋಧನ ಭಂಗಿಯಲ್ಲಿ ನೀವು ಇರಬೇಕು. ನೀವು ನಗುತ್ತಿರುವ ಯೋಧನಂತೆ ನಗುತ್ತಲಿರಿ. ಕೆಳಗೆ ಬಾಗಿದಂತೆ ಉಸಿರಾಡಿ, ಉಸಿರು ಬಿಡಿ ಮತ್ತು ಮೇಲೆ ಬನ್ನಿ. ಎರಡು ಬದಿಯಿಂದ ಕೈಗಳನ್ನು ಕೆಳಗೆ ತಂದು ಉಸಿರನ್ನು ಬಿಡಿ. ಈ ಭಂಗಿಯನ್ನು ಈಗ ಎಡದ ಬದಿಗೂ ನೀವು ಮಾಡಬೇಕು.



ಸೇತು ಬಂಧಾಸನ:



ಮೊದಲಿಗೆ ಎರಡು ಕಾಲುಗಳನ್ನು ಮಡಿಸಬೇಕು. ಎರಡು ಪೃಷ್ಠಗಳ ಹತ್ತಿರ ಎರಡು ಪಾದಗಳು ಬರಬೇಕು. ಈಗ ಬಲ ಹಸ್ತದಿಂದ ಬಲಗಾಲಿನ ಮಣಿಗಂಟನ್ನು ಎಡ ಹಸ್ತದಿಂದ ಎಡಗಾಲಿನ ಮಣಿಗಂಟನ್ನು ಹಿಡಿಯಬೇಕು. ನಿಧಾನವಾಗಿ ಸೊಂಟವನ್ನು ಮೇಲಕ್ಕೆ ಎತ್ತಬೇಕು. ಮಂಡಿಯ ಮೇರದಲ್ಲಿ ತೊಡೆಗಳು ಮತ್ತು ಸೊಂಟದ ಭಾಗ ಬರಬೇಕು. ಹೊಟ್ಟೆಯನ್ನು ಒಳಗಡೆ ಎಳೆದು ಎದೆಯನ್ನು ಮೇಲಕ್ಕೆ ಎತ್ತಿ ಹಿಂದಕ್ಕೆ ತಳ್ಳುತ್ತ ನೆತ್ತಿಯ ಭಾಗಕ್ಕೆ ನೆಲಕ್ಕೆ ತಾಗಿರಬೇಕು. ನಂತರ ಸೊಂಟವನ್ನು ಕೆಳಗಿಳಿಸಿ ನೆಲಕ್ಕೆ ತಾಗಿಸಬೇಕು. ಕೈಗಳನ್ನು ಬಿಟ್ಟು ಕಾಲುಗಳನ್ನು ಮುಂದೆ ಚಾಚಿ ವಿಶ್ರಾಂತಿ ಪಡೆಯಬೇಕು.



Comments


bottom of page